ಮೂತ್ರ - 
ರಕ್ತದಲ್ಲಿ ಲೀನವಾಗಿರುವ ನಿರುಪಯುಕ್ತ ಹಾಗೂ ನಿರ್ವಿಷೀಕೃತ (ಡಿಟಾಕ್ಸಿಕೇಟೆಡ್) ವಸ್ತುಗಳನ್ನು ವರ್ಜಿಸಲು ದೇಹದ ವಿಶಿಷ್ಟ ವಿಸರ್ಜನಾಂಗಗಳು ನಿರಂತರವಾಗಿ ತಯಾರುಮಾಡಿ ಆಗಿಂದಾಗ ಹೊರದೂಡುವ ದ್ರವ (ಯೂರಿನ್). 24 ಗಂಟೆಗಳಲ್ಲಿ ಇದರ ಪ್ರಮಾಣ 600-2500 ಮಿಲಿಲೀಟರ್‍ವರೆಗೆ ವ್ಯತ್ಯಾಸವಾಗುತ್ತಿರಬಹುದಾದರೂ ಸಾಧಾರಣವಾಗಿ 1500 ಮಿಲಿಲೀಟರ್‍ಗಳಷ್ಟು ಮೂತ್ರೋತ್ಪತ್ತಿ ಆಗುವುದು ವಾಡಿಕೆ. ಮೂತ್ರೋತ್ಪಾದನೆಯ ಪ್ರಮಾಣವನ್ನು ಪ್ರಭಾವಿಸುವ ಕಾರಕಗಳೆಂದರೆ ಹವೆ, ದೈಹಿಕಶ್ರಮ ಮತ್ತು ಮಾನಸಿಕ ಪರಿಸ್ಥಿತಿ. ಮೂತ್ರೋತ್ಪತ್ತಿಯನ್ನು ವರ್ಧಿಸುವ ಔಷಧಿಗಳ ಸೇವನೆಯಿಂದ ಅತಿಮೂತ್ರಸ್ಥಿತಿ ಉಂಟಾಗುವುದು ತಿಳಿದದ್ದೇ. ಸೇವಿಸಿದ ಆಹಾರದಲ್ಲಿ ಪ್ರೋಟೀನ್ ಅಂಶ ಹೆಚ್ಚಾಗಿದ್ದರೆ ಅಥವಾ ಮದ್ಯಸಾರಯುಕ್ತ ಇಲ್ಲವೇ ಮದ್ಯಸಾರರಹಿತ ಪಾನೀಯಗಳನ್ನೋ ಕೇವಲ ನೀರನ್ನೋ ಹೆಚ್ಚಾಗಿ ಸೇವಿಸಿದರೆ ಅಧಿಕ ಮೂತ್ರೋತ್ಪತ್ತಿ ಆಗಿ ವಿಸರ್ಜಿತವಾಗುತ್ತದೆ. ಬೇಸಗೆಯಲ್ಲಿ ಕಡಿಮೆ ಆಗಿಯೂ ಚಳಿಗಾಲದಲ್ಲಿ ಹೆಚ್ಚಾಗಿಯೂ ಮೂತ್ರ ವಿಸರ್ಜನೆ ಆಗುವುದು ಎಲ್ಲರಿಗೂ ತಿಳಿದಿದೆ. ಆ ಕಾಲಗಳಲ್ಲಿ ಕ್ರಮವಾಗಿ ಹೆಚ್ಚು ಬೆವರುವುದು ಅಥವಾ ಬೆವರದೇ ಇರುವುದು ಮೂತ್ರೋತ್ಪತ್ತಿ ಕಡಿಮೆ ಅಥವಾ ಹೆಚ್ಚು ಆಗಲು ಕಾರಣ. (ಇದಕ್ಕೆ ವ್ಯತಿರಿಕ್ತವಾಗಿ ಮೂತ್ರಪ್ರಮಾಣದ ಮೇಲೆ ಬೆವರಿನ ಪ್ರಮಾಣ ಆಧರಿಸಿಲ್ಲ ಎಂದು ತಿಳಿಯುವುದು ಮುಖ್ಯ). ದಿನದಲ್ಲಿ ಎಚ್ಚರವಾಗಿರುವ ಕಾಲದಲ್ಲಿ ಉತ್ಟತ್ತಿ ಆಗುವ ಮೂತ್ರದ ಅರ್ಧ ಪ್ರಮಾಣ ಮಾತ್ರ ರಾತ್ರಿ ನಿದ್ರಾಕಾಲದಲ್ಲಿ ಉತ್ಪತ್ತಿಯಾಗಿ ಕೇವಲ ಒಂದೆರಡು ಬಾರಿ ಮಾತ್ರ ವಿಸರ್ಜಿತವಾಗಬಹುದು. ಹಗಲಿನಲ್ಲಿ ಸಾಮಾನ್ಯವಾಗಿ ಇದರ ನಾಲ್ಕು ಪಟ್ಟು ಬಾರಿ ಮೂತ್ರ ವಿಸರ್ಜನೆ ಆಗುವುದಿದೆ.

	ಮೂತ್ರ ಸಾಂದ್ರತೆ 1.003ರಿಂದ 1.030 ವರೆಗೆ ಇರಬಹುದು. ಮೂತ್ರೋತ್ಪತ್ತಿ ಕಡಿಮೆ ಆಗಿರುವಾಗ ಮೂತ್ರ (ರಾತ್ರಿ ಕಾಲದ ಮೂತ್ರವನ್ನು ಉದಾಹರಿಸಬಹುದು) ಅಧಿಕ ಸಾಂದ್ರವಾಗಿಯೂ ಅಧಿಕವಾಗಿರುವಾಗ ಕಡಿಮೆ ಸಾಂದ್ರವಾಗಿಯೂ ಇರುತ್ತದೆ. ವಾಸ್ತವವಾಗಿ ಮೂತ್ರಸಾಂದ್ರತೆ ಅದರಲ್ಲಿ ವಿಲೀನವಾಗಿರುವ ಘನ ವಸ್ತುಗಳ ಪ್ರಮಾಣವನ್ನು ಆಧರಿಸಿರುವುದು. ದಿನದ 24 ಘಂಟೆಗಳ ಮೂತ್ರವನ್ನು ಶೇಖರಿಸಿ ಅದರ ಸಾಂದ್ರತೆಯನ್ನು ನಿರ್ಣಯಿಸಿ ಆ ಸಂಖ್ಯೆಯ ಕೊನೆಯ ಎರಡು ದಶಮಾಂಶಸ್ಥಾನದ ಅಂಕೆಗಳನ್ನು 2.6ರಿಂದ ಗುಣಿಸಿದರೆ ಬರುವ ಲಬ್ಧ ಒಂದು ಲೀಟರ್ ಮೂತ್ರದಲ್ಲಿ ವಿಸರ್ಜಿತವಾದ ಘನವಸ್ತುಗಳ ಪ್ರಮಾಣವನ್ನು ಗ್ರಾಮ್‍ಗಳಲ್ಲಿ ಸೂಚಿಸುತ್ತದೆ. 2.6ನ್ನು ಲಾಂಗ್ ಎಂಬಾತ ಅನುಭವದಿಂದ ಪತ್ತೆ ಮಾಡಿದ್ದರಿಂದ ಇದಕ್ಕೆ ಲಾಂಗನ ಗುಣಾಂಕ ಎಂದೇ ಹೆಸರು.

	ಸಾಮಾನ್ಯವಾಗಿ ಮೂತ್ರಕ್ಕೆ ಸುಮಾರು ಠಿಊ 6ರಷ್ಟು ಮಟ್ಟದ ಆಮ್ಲೀಯ ಗುಣ ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಆಮ್ಲೀಯತೆ ಠಿಊ 4.7ರಷ್ಟು ಮಟ್ಟ ಏರಬಹುದು. ಇನ್ನು ಕೆಲವು ಸಂದರ್ಭಗಳಲ್ಲಿ ಮೂತ್ರ ಪ್ರತ್ಯಾಮ್ಲೀಯ ಗುಣವನ್ನೇ ಹೊಂದಿದ್ದು ಅದರ ಠಿಊ 8ರ ಮಟ್ಟದಲ್ಲಿ ಇರಬಹುದು. ಆಹಾರದಲ್ಲಿ ಪ್ರೋಟೀನ್ ಅಂಶ ಬಲು ಹೆಚ್ಚಾಗಿರುವಾಗ ಮತ್ತು ವ್ಯಕ್ತಿ ಜ್ವರದಿಂದ ನರಳುತ್ತಿರುವಾಗ ಆಮ್ಲೀಯತೆ ಜಾಸ್ತಿ. ಹುಳಿಹಣ್ಣು ಮತ್ತು ತರಕಾರಿಗಳನ್ನು ಪ್ರಧಾನ ಆಹಾರವಾಗಿ ಸೇವಿಸಿದ್ದಾಗ ಮೂತ್ರಪ್ರತ್ಯಾಮ್ಲೀಯ ಗುಣದ್ದಾಗಿರಬಹುದು.

	ಮೂತ್ರಕ್ಕೆ ಸಾಮಾನ್ಯವಾಗಿ ಒಣಹುಲ್ಲಿನ ಬಣ್ಣವಿರುತ್ತದೆ. ಮೂತ್ರೋತ್ಪತ್ತಿ ಅಧಿಕವಾಗಿದ್ದಾಗ ಅದರ ವರ್ಣ ಇನ್ನೂ ಪೇಲವ. ಜ್ವರ ಮುಂತಾದ ಕಾರಣಗಳಿಂದ ಮೂತ್ರಸಾಂದ್ರತೆ ಹೆಚ್ಚಾಗಿದ್ದಾಗ ಕೆಂಪು ಮಿಶ್ರಿತ ಹಳದಿ ಬಣ್ಣದ್ದಾಗಿರುತ್ತದೆ. ಆದರೆ ಮಧುಮೂತ್ರರೋಗಿಗಳಲ್ಲಿ ಮೂತ್ರದ ಸಾಂದ್ರತೆ ಹೆಚ್ಚಾಗಿದ್ದರೂ ಅದರ ಬಣ್ಣ ತಿಳಿಹಳದಿ ವರ್ಣವಾಗಿರುವುದೇ ಸಾಮಾನ್ಯ. ಯೂರೊಕ್ರೋಮ್ ಮತ್ತು ಪಿತ್ತವರ್ಣದ ವಸರ್ಜಿತ ರೂಪವಾದ ಯೂರೊಬಿಲಿನ್ ಮೂತ್ರದ ಬಣ್ಣಕ್ಕೆ ಕಾರಣ. ರೋಗದ ಲಕ್ಷಣವಾಗಿ ಸ್ವತಃ ಪಿತ್ತವರ್ಣವೇ ಮೂತ್ರದಲ್ಲಿ ಇರುವುದುಂಟು. ಇಂಥ ಸಂದರ್ಭದಲ್ಲಿ ಮೂತ್ರ ಗಾಢ ಹಳದಿಬಣ್ಣ ಇಲ್ಲವೇ ಕಂದುಬಣ್ಣ ತಳೆಯಬಹುದು. ಮೂತ್ರ ಕಾರಣಾಂತರಗಳಿಂದ ರಕ್ತಮಿಶ್ರಿತವಾಗಿದ್ದರೆ ರಕ್ತ ಹೆಚ್ಚು ಕೆಂಪಾಗಿರುತ್ತದೆ. ಇದಕ್ಕೆ ರಕ್ತಮೂತ್ರ ಸ್ಥಿತಿ (ಹಿಮಚ್ಯೂರಿಯ) ಎಂದು ಹೆಸರು. ಶೇಖರಿಸಲ್ಪಟ್ಟಿದ್ದ ಮೂತ್ರ ಕಪ್ಪು ಛಾಯೆ ತಾಳಬಹುದು. ಇದು ಮೂತ್ರದಲ್ಲಿ ಹೋಮೊಜೆನ್‍ಟಿಸಿಕ್ ಆಮ್ಲ ಇರುವುದನ್ನು ಸೂಚಿಸುತ್ತದೆ. ಈ ಆಮ್ಲವಿಸರ್ಜನೆ ಅನ್ಯತ್ರ ಆರೋಗ್ಯವಂತರೇ ಆಗಿರುವ ಕೆಲವು ವ್ಯಕ್ತಿಗಳ ಆಜನ್ಮ ದೇಹಕ್ರಿಯಾ ವೈಚಿತ್ರ್ಯ.

	ದಿನದ ಮೂತ್ರದಲ್ಲಿ ಲೀನವಾಗಿರುವ ಘನಪದಾರ್ಥಗಳು ಸುಮಾರು 50 ಗ್ರಾಮ್‍ಗಳಷ್ಟು ಇವುಗಳಲ್ಲಿ ಸುಮಾರು ಅರ್ಧ ಯೂರಿಯ, ಕಾಲುಭಾಗ ಸೋಡಿಯಮ್ ಕ್ಲೋರೈಡ್ ಮತ್ತು ಇನ್ನು ಕಾಲು ಭಾಗ ಮಿಕ್ಕ ಅನೇಕ ವಸ್ತುಗಳು. ವ್ಯಕ್ತಿಯ ಆಹಾರದ ಪ್ರೋಟೀನ್ ಅಂಶದ ಉಪಾಪಚಯದ ಅಂತ್ಯ ವಸ್ತು ಯೂರಿಯ. ಆದ್ದರಿಂದ ಅಧಿಕ ಪ್ರೋಟೀನ್‍ಯುಕ್ತ ಆಹಾರಸೇವನೆಯ ಸಂದರ್ಭದಲ್ಲಿ ಮೂತ್ರದಲ್ಲಿ ಯೂರಿಯದ ಪ್ರಮಾಣ ಹೆಚ್ಚಾಗಿರುತ್ತದೆ. 

 ದೇಹದ ಸ್ನಾಯುಗಳಲ್ಲಿ ಕ್ರಿಯಾಟಿನ್ ಎಂಬ ರಾಸಾಯನಿಕವಿದ್ದು ಸ್ನಾಯುಗಳ ನೈಸರ್ಗಿಕ ಸವೆತದಿಂದ ಹೊರಬಿದ್ದು ರಕ್ತದಲ್ಲಿ ಸೇರಿ ಕ್ರಿಯಾಟಿನ್ ಎಂಬ ವ¸್ತÀುವಾಗಿ ಮಾರ್ಪಟ್ಟು ಮೂತ್ರದಲ್ಲಿ ವಿಸರ್ಜಿತವಾಗುತ್ತದೆ. ಕಾರಣಾಂತರಗಳಿಂದ ಸ್ನಾಯುಗಳ ಅವನತಿ ಹೆಚ್ಚಾದ ಹೊರತು ದಿನದ ಮೂತ್ರದಲ್ಲಿ ಕ್ರಿಯಾಟಿನ್ನಿನ ಪ್ರಮಾಣ (ಗಂಡಸರಲ್ಲಿ ಸುಮಾರು 1.4 ಗ್ರಾಮ್. ಹೆಂಗಸರಲ್ಲಿ ಸ್ವಲ್ಪ ಕಡಿಮೆ) ಬದಲಾಗುವುದಿಲ್ಲ. ಸ್ನಾಯುಗಳ ಅಧಿಕ ಶೈಥಿಲ್ಯದ ಸಂದರ್ಭಗಳಲ್ಲಿ ಸ್ವತಃ ಕ್ರಿಯಾಟಿನ್ನೇ ಮೂತ್ರದಲ್ಲಿ ವಿಸರ್ಜಿತವಾಗುವುದಿದೆ. ಗರ್ಭಿಣಿಯಲ್ಲೂ ಬಾಣಂತಿಯಲ್ಲೂ ಇದು ನೈಸರ್ಗಿಕ.

	ಮೂತ್ರದಲ್ಲಿ ಇರುವ ಇನ್ನೊಂದು ಸಾವಯವ ವಸ್ತುವೆಂದರೆ ಯೂರಿಕ್ ಆಮ್ಲ. ದಿನದ ಮೂತ್ರದಲ್ಲಿ ಸುಮಾರು 700 ಮಿಲಿಗ್ರಾಮ್‍ಗಳಷ್ಟು ಇದ್ದರೂ ಮೂತ್ರದ ಆಮ್ಲೀಯತೆಗೆ ಇದು ಕಾರಣವೇ ಅಲ್ಲ. ದೇಹದಲ್ಲಿ ಸದಾ ನಶಿಸುತ್ತಿರುವ ಕೋಶಗಳ ಮತ್ತು ಆಹಾರದಲ್ಲಿರುವ ಕೋಶಗಳ ದ್ರವ್ಯದ (ಪ್ರೋಟೊಪ್ಲಾಸ್ಮ್) ಮುಖ್ಯಘಟಕವಾದ ನ್ಯೂಕ್ಲಿಯಕ್ ಆಮ್ಲದ ಪ್ಯೂರಿನ್ ಅಂಶಗಳ ಉಪಾಪಚಯದ ಅಂತ್ಯವಾಗಿ ಯೂರಿಕ್ ಆಮ್ಲ ಫಲಿಸಿ ವಿಸರ್ಜಿತಮಾಗುತ್ತದೆ. ಲ್ಯುಕೀಮಿಯ (ರಕ್ತದ ಏಡಿಗಂತಿ), ಗೌಟ್ ಮುಂತಾಕ ರೋಗಗಳಲ್ಲಿ ಯೂರಿಕ್ ಆಮ್ಲ ವಿಸರ್ಜನೆ ಅಧಿಕವಾಗಿರುತ್ತದೆ.

	ಆಹಾರ ಪಚನಾಂತ್ಯ ಸಾಮಗ್ರಿಗಳಾದ ಅಮೈನೋ ಆಮ್ಲಗಳು, ಗ್ಲೂಕೋಸ್ ಮುಂತಾದ ಸರಳ ಸಕ್ಕರೆಗಳು ಮತ್ತು ಮೇದೋ ಆಮ್ಲಗಳು ಸಾಮಾನ್ಯವಾಗಿ ಮೂತ್ರದಲ್ಲಿ ಕಂಡು ಬರುವುದಿಲ್ಲ. ಹಾಗೇನಾದರೂ ಅದದ್ದಾದರೆ ಅದು ಸಾಧಾರಣವಾಗಿ ರೋಗಸೂಚಕ. ಅನ್ಯತಃ ನಿರೋಗಿಗಳೇ ಆಗಿರುವವರಲ್ಲಿ ವಿರಳವಾಗಿ ಗ್ಲೂಕೋಸ್, ಫ್ರಕ್ಟೋಸ್, ಗ್ಯಾಲಾಕ್ಟೋಸ್, ಲ್ಯಾಕ್ಟೋಸ್, ಮುಂತಾದ ಸಕ್ಕರೆಗಳು, ಸಿಸ್ಟಿನ್ ಮುಂತಾದ ಅಮೈನೋ ಆಮ್ಲಗಳು, ಮೇದೋ ಆಮ್ಲಗಳು ಮತ್ತು ಪೆಂಟೋನ್ ಎಂಬ ಸಕ್ಕರೆ ಅಲ್ಪಸ್ವಲ್ಪವಾಗಿ ವಿಸರ್ಜಿತವಾಗಬಹುದು. ಜನ್ಮತಃ ಆ ವ್ಯಕ್ತಿಗಳಲ್ಲಿ ಸಂಬಂಧಿತ ಕಿಣ್ವಗಳ ಕೊರತೆಯೆ ಇದರ ಕಾರಣ.

	ಮೂತ್ರದಲ್ಲಿ ವಿಸರ್ಜಿತವಾಗುವ ನಿರವಯವ ವಸ್ತುಗಳಲ್ಲಿ ಮುಖ್ಯವಾದದ್ದು ಸೋಡಿಯಮ್ ಕ್ಲೋರೈಡ್ (ಅಡುಗೆ ಉಪ್ಪು), ದಿನದ ಮೂತ್ರದಲ್ಲಿ ಸುಮಾರು 10 ಗ್ರಾಮ್‍ಗಳಷ್ಟಿರುತ್ತದೆ. ಉಪ್ಪಿನ ಸೇವನೆಯಿಂದಾಗಿ ಅದು ಮೂತ್ರದಲ್ಲಿ ವಿಸರ್ಜಿಸಲ್ಪಡುತ್ತದೆ. ಉಪ್ಪನ್ನೂ ಸೇವಿಸದ ನಿರಶನ ಸಂದರ್ಭಗಳಲ್ಲಿ ಮೂತ್ರದಲ್ಲಿ ಅದು ಹೆಚ್ಚು ಕಡಿಮೆ ಇಲ್ಲವಾಗಿಯೆ ಹೋಗಬಹುದು. ಸೋಡಿಯಮ್ ಕ್ಲೋರೈಡನ್ನು ಬಿಟ್ಟರೆ ಸಲ್ಪೇಟುಗಳು ಮತ್ತು ಫಾಸ್ಫೇಟುಗಳು (ಅನುಕ್ರಮವಾಗಿ 2.5 ಮತ್ತು 2 ಗ್ರಾಮ್‍ಗಳಷ್ಟು) ಮುಖ್ಯವಾಗಿ ಸೋಡಿಯಮ್ ಹಾಗೂ ಪೊಟ್ಯಾಸಿಯಮ್ ಲವಣಗಳಾಗಿ ವರ್ಜಿತವಾಗುತ್ತವೆ. ಕಿಂಚಿತ್ತಾಗಿ ಕ್ಯಾಲ್ಸಿಯಮ್ ಹಾಗೂ ಮೆಗ್ನೀಸಿಯಮ್ ಕ್ಲೋರೈಡುಗಳು (0.2 ಗ್ರಾಮ್ ನಷ್ಟು) ವಿಸರ್ಜಿತವಾಗುವುವು. ಫಾಸ್ಪೇಟುಗಳಲ್ಲಿ ಡೈ ಸೋಡಿಯಮ್ ಹೈಡ್ರೋಜನ್ ಫಾಸ್ಪೇಟ್ ಹಾಗೂ ಡೈಸೋಡಿಯಮ್ ಹೈಡ್ರೊಜನ್ ಫಾಸ್ಪೇಟುಗಳ ಪರಸ್ಪರ ಪ್ರಮಾಣ ಮೂತ್ರದ ಆಮ್ಲೀಯ ಅಥವಾ ಪ್ರತ್ಯಾಮ್ಲೀಯ ಗುಣವನ್ನು ನಿರ್ಧರಿಸುತ್ತದೆ. ಸಾಧಾರಣವಾಗಿ ಇದು 4:1ರಷ್ಟಿರುತ್ತದೆ.

	ರೋಗದ ಪರಿಸ್ಥಿತಿಗಳಲ್ಲಿ ಮೂತ್ರದ ಭೌತ ಹಾಗೂ ರಾಸಾಯನಿಕ ವೈಲಕ್ಷಣ್ಯಗಳು ವಿಶಿಷ್ಟವಾಗಿ ಬದಲಾಗುತ್ತವೆ. ಆದ್ದರಿಂದ ರೋಗತನಿಖೆ ಹಾಗೂ ಪತ್ತೆಯಲ್ಲಿ ಮೂತ್ರಪರೀಕ್ಷೆ ಬಲು ಮುಖ್ಯ. ನೈಸರ್ಗಿಕ ವಿಸರ್ಜನೆಯಲ್ಲಿ ಕಂಡುಬರಬಹುದಾದ ವೈಪರೀತ್ಯಗಳನ್ನು ಈ ಮೊದಲೇ ಸೂಚಿಸಿದೆ. ಇವನ್ನು ಬಿಟ್ಟು ಕೆಲವು ರೋಗಗಳಲ್ಲಿ ರೋಗಲಕ್ಷಣವಾಗಿಯೇ ಮೂತ್ರದಲ್ಲಿ ವಿಸರ್ಜಿತವಾಗುವ ಕೆಲವು ವಸ್ತುಗಳ ವಿಷಯವನ್ನು ಮುಂದೆ ತಿಳಿಸಿದೆ.

	ಆಲ್ಬ್ಯುಮಿನ್ : ಇದು ಒಂದು ಪ್ರೋಟೀನ್. ಮೂತ್ರಪಿಂಡರೋಗಗಳಲ್ಲಿ ದಿನಕ್ಕೆ ಸುಮಾರು 10-20 ಗ್ರಾಮ್‍ಗಳಷ್ಟು ಆಲ್ಬ್ಯುಮಿನ್ ವಿಸರ್ಜಿತವಾಗುತ್ತದೆ. ಮೂತ್ರಪರೀಕ್ಷೆಯಲ್ಲಿ ಗಣನೀಯವಾಗಿಯೇ ಆಲ್ಬ್ಯುಮಿನ್ ಪತ್ತೆ ಆಯಿತೆಂದರೆ ಅದು ಮೂತ್ರಪಿಂಡದ ತೀವ್ರರೋಗ ಹಾಗೂ ಕ್ರಿಯಾಭ್ರಷ್ಟತೆಯ ಸ್ಟಷ್ಟಸೂಚನೆ. ಬೆನ್ಸಜೋನ್ಸ್‍ಪ್ರೋಟಿನ್ ಎಂಬುದು ಇನ್ನೊಂದು ವಿಸರ್ಜಿತವಾಗುವ ಪ್ರೋಟೀನ್, ವಾಸ್ತವವಾಗಿ ಇದು ಪ್ರೋಟಿಯೋಸ್ ಎಂಬ ಸ್ವಲ್ಟ ಬೃಹದಣುಗಾತ್ರದ ಪ್ರೋಟೀನ್ ಸಂಬಂಧಿ. ಇದು ಇರುವ ಮೂತ್ರವನ್ನು ಪ್ರಯೋಗನಳಿಕೆಯಲ್ಲಿಟ್ಟು ಸ್ವಲ್ಟ ಬಿಸಿಮಾಡಿದರೆ (50ಲಿ-60ಲಿಅ) ಮೂತ್ರ ಬಗ್ಗಡವಾಗುತ್ತದೆ. ಕುದಿಯುವಷ್ಟು ಬಿಸಿಮಾಡಿದರೆ ತಿಳಿಯಾಗುತ್ತದೆ ಮತ್ತು ಆರಿದಾಗ ಪುನಃ ಬಗ್ಗಡವಾಗುತ್ತದೆ. ಇದು ಬೆನ್ಸಜೋನ್ಸ್‍ಪ್ರೋಟೀನಿನ ವಿಶಿಷ್ಟ ಲಕ್ಷಣ. ಮೈಲೋಮ, ಲಿಂಫೊಸಾರ್ಕೋಮ ಮತ್ತು ಹಾಜ್ಜ್‍ಕಿನ್ನನ ರೋಗ ಇವುಗಳಲ್ಲಿ ಈ ಪ್ರೋಟೀನ್ ವಿಸರ್ಜಿತವಾಗುವುದರಿಂದ ಆ ರೋಗಗಳ ಪತ್ತೆಗೆ ಮೂತ್ರಪರೀಕ್ಷೆ ಮುಖ್ಯ.

	ಇದೇ ರೀತಿ ಮಧುಮೂತ್ರರೋಗದ ವಿಶಿಷ್ಟಲಕ್ಷಣವಾಗಿ ಮೂತ್ರದಲ್ಲಿ ಗ್ಲೂಕೋಸ್ ವಿಸರ್ಜಿತವಾಗುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಷಯ. ಮಧುಮೂತ್ರರೋಗದ ಉಲ್ಬಣಾವಸ್ಥೆಯಲ್ಲಿ ಅಸಿಟೋನ್, ಅಸಿಟೊ ಅಸಿಟಿಕ್ ಆಮ್ಲ, ಬೀಟ ಆಕ್ಸಿಬ್ಯೂಟೈರಿಕ್ ಆಮ್ಲಗಳು ವಿಸರ್ಜಿವಾಗುವುದಿದೆ. ಕೀಟೋನುಗಳೆಂಬ ರಾಸಾಯನಿಕಗಳ ಗುಂಪಿಗೆ ಸೇರಿದವೆಂದು ಆ ವಸ್ತುಗಳನ್ನು ಗಣಿಸುವುದರಿಂದ ಈ ಸ್ಥಿತಿಗೆ ಕೀಟೊನ್ಯೂರಿಯ ಎಂದು ಹೆಸರಿದೆ. ಇದರ ಪತ್ತೆಗೆ ಮೂತ್ರ ಪರೀಕ್ಷೆ ಅಗತ್ಯ.

	ಪಿತ್ತವರ್ಣಕಗಳು ವಿಸರ್ಜಿತವಾಗುವುದನ್ನು ಮೇಲೆ ಹೇಳಿದೆ. ಕಾಮಾಲೆಯಲ್ಲಿ ಪಿತ್ತದರ್ಣಕವಾದ ಬಿಲಿರೂಬಿನ್ ಮೂತ್ರದಲ್ಲಿ ವಿಸರ್ಜಿತವಾಗಬಹುದು. ಇಲ್ಲವೆ ಆಗದೇ ಇರಬಹುದು. ಮೂತ್ರಪರೀಕ್ಷೆಯಲ್ಲಿ ಇದನ್ನು ಪತ್ತಮಾಡಿ ವಿವಿಧ ಬಗೆಯ ಕಾಮಾಲೆಗಳಲ್ಲಿ ವ್ಯಕ್ತಿ ನರಳುತ್ತಿರುವ ಬಗೆ ಯಾವುದು ಎಂದು ತಿಳಿಯಬಹುದು. ಬಿಲಿರೂಬಿನ್ ರೂಪಾಂತರಗೊಂಡು ಯೂರೊಬಿಲಿನೊಜೆನ್ನಾಗಿ ಮೂತ್ರದ ಸಾಮಾನ್ಯ ವರ್ಣಕ್ಕೆ ಕಾರಣವಾಗುವ ವಿಷಯವನ್ನು ಈ ಮೊದಲೇ ಹೇಳಿದೆ. ಯೂರೊ ಬಿಲಿನೊಜೆನ್ನಿನ ಪ್ರಮಾಣ ಹೆಚ್ಚಾಗಿದ್ದರೆ ಅದರ ಮೂಲವಸ್ತುವಾದ ಬಿಲಿರೂಬಿನ್ ರಕ್ತದಲ್ಲಿ ಹೆಚ್ಚು ಪ್ರಮಾಣದಲ್ಲಿದೆ ಎಂದು ಅರ್ಥ. ಯೂರೊಬಿಲಿನೊಜಿನ್ ಲೋಪವಾಗಿದ್ದರೆ ಪಿತ್ತರಸ ಕರುಳಿಗೆ ಸೇರುತ್ತಿಲ್ಲ (ಬಹುಶಃ ನಾಳಗಳ ಅಡಚಣೆಯಿಂದಾಗಿ) ಎಂದು ತಿಳಿಯಬಹುದು.
(ಎಸ್.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ